ರ್ಯಾಪ್ಸನ್, ಇ ಜೆ
1861-1937. ಸುಪ್ರಸಿದ್ಧ ಭಾರತೀಯಶಾಸ್ತ್ರ (ಇಂಡಾಲಜಿ) ವಿದ್ವಾಂಸ. 1861ರಲ್ಲಿ ಇಂಗ್ಲೆಂಡಿನ ಲೀಸಸ್ಟರ್‍ನಲ್ಲಿ ಜನಿಸಿದ. ಅಭಿಜಾತ ವಿಷಯಗಳೊಂದಿಗೆ ಟ್ರೈಪಾಸ್ ಅನ್ನು 1883ರಲ್ಲಿ ಗಳಿಸಿ ಭಾರತೀಯಶಾಸ್ತ್ರದ ಬಗ್ಗೆ ತನ್ನ ಆಸಕ್ತಿಯನ್ನು ಬೆಳೆಸಿಕೊಂಡ. 1887ರಲ್ಲಿ ಬ್ರಿಟಿಷ್ ಮ್ಯೂಸಿಯಂನ ನಾಣ್ಯಶಾಸ್ತ್ರ ವಿಭಾಗದಲ್ಲಿ ಸಹಾಯಕ ನಾಗಿ ಕೆಲಸಕ್ಕೆ ಸೇರಿದ. ಈ ಸಮಯದಲ್ಲಿ ಈತ ಖರೋಷ್ಠಿ ಲಿಪಿಯ ಬಗೆಗೆ ಪರಿಣತಿ ಪಡೆದು ವಿದ್ವಾಂಸನೆನಿಸಿಕೊಂಡ. ಚೀನೀ ತುರ್ಕಿಸ್ತಾನದಲ್ಲಿ ಸರ್ ಅರಲ್‍ಸ್ಟೇನ್ ಎಂಬಾತ ಸಂಗ್ರಹಿಸಿದ ಖರೋಷ್ಠಿ. ಶಾಸನಗಳನ್ನು ಓದಲು ಈತನೇ ಅತ್ಯಂತ ಸಮರ್ಥನೆಂದು ಪರಿಗಣಿಸಿದ ಅಧಿಕಾರಿಗಳು ಈ ಕೆಲಸವನ್ನು ಇವನಿಗೆ ವಹಿಸಿಕೊಟ್ಟರು. 1906ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದ ಸಂಸ್ಕøತ ಪೀಠಕ್ಕೆ ಇವನನ್ನು ಆಯ್ಕೆ ಮಾಡಲಾಯಿತು. ಈ ವಿಶ್ವವಿದ್ಯಾಲಯ ಕೇಂಬ್ರಿಜ್ ಹಿಸ್ಟರಿ ಆಫ್ ಇಂಡಿಯ ಎಂಬ ಮಾಲಿಕೆಯನ್ನು ಆರಂಭಿಸಿದಾಗ ಮೊದಲಿನ ಎರಡು ಸಂಪುಟಗಳಿಗೆ ಈತನನ್ನು ಸಂಪಾದಕನನ್ನಾಗಿ ನೇಮಿಸಿತು. 1920ರಲ್ಲಿ ಈತ ಸರ್ ಅರಲ್‍ಸ್ಟೇನನ ಸಂಗ್ರಹದ ಖರೋಷ್ಠಿ ಶಾಸನಗಳ ಮೊದಲ ಸಂಪುಟ ವನ್ನು ಪ್ರಕಟಿಸಿದ. 1927 ಮತ್ತು 1929ರಲ್ಲಿ ಬೊಯರ್ ಮತ್ತು ಸೆನಾರ್ಟ್ ಅವರ ಸಹಾಯದೊಡನೆ ಈ ಶಾಸನ ಸಂಪುಟದ ಎರಡು ಮತ್ತು ಮೂರನೆಯ ಸಂಪುಟಗಳನ್ನು ಪ್ರಕಟಿಸಿದ.

1922ರಲ್ಲಿ ಈತ ಕೇಂಬ್ರಿಜ್ ಹಿಸ್ಟರಿಯ ಮೊದಲ ಸಂಪುಟವನ್ನು ಪ್ರಕಟಿಸಿದ. ಇದರಲ್ಲಿ ಪ್ರಾಚೀನ ಭಾರತಕ್ಕೆ ಸಂಬಂಧಿಸಿದಂತೆ ಮೂರು ಅಧ್ಯಾಯಗಳನ್ನು ಬರೆದ. ಈ ಅಧ್ಯಾಯಗಳು ಇಂದಿಗೂ ಪ್ರಮಾಣ ಪೂರ್ವಕವಾಗಿದ್ದು ಈತನ ವಿದ್ವತ್ತಿಗೆ ಸಾಕ್ಷಿಯಾಗಿವೆ ಎಂಬುದು ವಿದ್ವಾಂಸರ ಅಭಿಪ್ರಾಯ. ಖಚಿತವಾದ ಆಕರಗಳ ಕೊರತೆಯಿಂದಾಗಿ ಪ್ರಾಚೀನ ಭಾರತದ ಇತಿಹಾಸವನ್ನು ರಚಿಸುವುದು ಇಲ್ಲವೇ ಸಂಪಾದಿ ಸುವುದು ಬಲು ಕಷ್ಟದ ಕೆಲಸ. ಆದರೆ ಈತ ಸಂಪಾದಿಸಿರುವ ಕೇಂಬ್ರಿಜ್ ಇತಿಹಾಸದ ಮೊದಲನೆಯ ಸಂಪುಟದಲ್ಲಿ ಅತ್ಯಂತ ಜಾಗರೂಕತೆಯಿಂದ ಊಹಾಪೋಹಗಳನ್ನು ಬಿಟ್ಟು ಖಚಿತವಾಗಿಯೂ ನಿರ್ದುಷ್ಟವಾಗಿಯೂ ಸಂಪಾದನೆ ಮಾಡಿ ಇದೊಂದು ಮಾದರಿ ಸಂಪುಟವಾಗುವ ಹಾಗೆ ಮಾಡಿರುವುದು ಈತನ ಹೆಚ್ಚಳ. ಇದೇ ಮಾಲೆಯ ಎರಡನೆಯ ಸಂಪುಟವನ್ನು ಸಂಪಾದಿಸುವ ಕೆಲಸದಲ್ಲಿ ತೊಡಗಿದಾಗ ಈತ ನಿಧನಹೊಂದಿದ.

ನಾಣ್ಯಶಾಸ್ತ್ರ ಈತನಿಗೆ ಅತ್ಯಂತ ಪ್ರಿಯವಾದ ವಿಷಯವಾಗಿತ್ತು. 1897ರಲ್ಲಿ ಈತ ರಚಿಸಿದ ಇಂಡಿಯನ್ ಕಾಯಿನ್ಸ್ ಖಚಿತತೆಗೆ ಹೆಸರಾದ ನಾಣ್ಯಗ್ರಂಥ. ಇದರಲ್ಲಿ ವಿಶೇಷವಾಗಿ ಪ್ರಾಚೀನ ಭಾರತದ ಅಂದರೆ ಮಹಮ್ಮದೀಯರಿಗೂ ಮುಂಚಿನ ನಾಣ್ಯಶಾಸ್ತ್ರ ಇತಿಹಾಸದ ಪ್ರಮುಖ ಸಂಗತಿಗಳಿವೆ. ಈ ಗ್ರಂಥದಲ್ಲಿ ಕೊಟ್ಟಿರುವ ಗ್ರಂಥಸೂಚಿ ಅತ್ಯಂತ ಉಪಯುಕ್ತವೆನಿಸಿದೆ. 1908ರಲ್ಲಿ ಬ್ರಿಟಿಷ್ ಮ್ಯೂಸಿಯಂನ ಸಂಗ್ರಹದಲ್ಲಿದ್ದ ಭಾರತೀಯ ನಾಣ್ಯಗಳನ್ನು ಕುರಿತು ಯಾದಿಯನ್ನು ತಯಾರಿಸಿದ. ಕ್ಯಾಟಲಾಗ್ ಆಫ್ ಕಾಯಿನ್ಸ್ ಆಫ್ ಆಂಧ್ರ ಡೈನಾಸ್ಟಿ, ವೆಸ್ಟರ್ನ್ ಸತ್ರಪ್ಸ್, ದಿ ತ್ರೈಕೂಟಕ ಡೈನಾಸ್ಟಿ ಅಂಡ್ ದಿ ಬೋಧಿ ಡೈನಾಸ್ಟಿ ಇನ್ ದಿ ಬ್ರಿಟಿಷ್ ಮ್ಯೂಸಿಯಂ ಎಂಬ ಈ ಗ್ರಂಥ ನಾಣ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವೆನಿಸಿದೆ.  ಇದರಲ್ಲಿ ಸಾತವಾಹನ ರಾಜವಂಶದ ವಿವಿಧ ರಾಜರುಗಳ ಮೇಲೆ ಬರೆದಿರುವ ಟಿಪ್ಪಣಿ ಹಾಗೂ ಪೀಠಿಕೆ ವಿದ್ವತ್‍ಪೂರ್ಣವಾಗಿದ್ದು ಬಲು ಉಪಯುಕ್ತ ವೆನಿಸಿದೆ. ಇಂದಿಗೂ ಬ್ರಿಟಿಷ್ ಮ್ಯೂಸಿಯಂನಲ್ಲಿರುವ ಈ ರಾಜವಂಶಗಳ ನಾಣ್ಯ ನಮೂನೆಗಳಿಗೆ ಇದೇ ಅತ್ಯಂತ ಪ್ರಮಾಣಭೂತ ಗ್ರಂಥವಾಗಿದೆ. ಇಷ್ಟೇ ಅಲ್ಲದೆ ಇಂಡಿಯನ್ ಆಂಟಿಕ್ವೆರಿ ಮತ್ತು ಇತರ ನಿಯತಕಾಲಿಕೆಗಳಲ್ಲಿ ಈತ ಹತ್ತಾರು ಸಂಶೋಧನ ಲೇಖನಗಳನ್ನು ಪ್ರಕಟಿಸಿದ್ದಾನೆ. 1914ರಲ್ಲಿ ಈತ ಪ್ರಕಟಿಸಿದ ಏನ್ಷೆಂಟ್ ಇಂಡಿಯ ಎಂಬ ಗ್ರಂಥ ಅಂದಿನವರೆಗೆ ದೊರಕಿದ್ದ ಎಲ್ಲ ಆಕರಗಳನ್ನು ಸಮಗ್ರವಾಗಿ ಕಲೆಹಾಕಿ ರಚಿಸಿದ ಗ್ರಂಥ. ಅನೇಕ ಮುದ್ರಣಗಳನ್ನು ಕಂಡಿರುವ ಈ ಗ್ರಂಥ ಬಹಳ ಜನಪ್ರಿಯವಾಗಿದೆ.		
(ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ